ನಾಡೀ ಜಂಘ -
ಪುರಾಣೋಕ್ತವಾದ ಒಂದು ಬಕಪಕ್ಷಿ. ಹಿಂದೆ ಪರಾಶರಮುನಿ ವಂಶದ ವಿಶ್ವರೂಪನೆಂಬ ಬ್ರಾಹ್ಮಣನಿಗೆ ಬಕನೆಂಬ ಮಗನಿದ್ದ. ಈತ ಉತ್ತರಾಯಣ ಪರ್ವದಲ್ಲಿ ತಂದೆ ಪೂಜೆಗೆ ಇಟ್ಟಿದ್ದ ಶಿವಲಿಂಗವನ್ನು ತೆಗೆದು ತುಪ್ಪದೊಳಗೆ ಹಾಕಿದ. ಮರುದಿನ ತಂದೆ ಪೂಜೆಗೆ ಹೋದಾಗ ಲಿಂಗವನ್ನು ಕಾಣದೆ, ಸವಿಮಾತುಗಳಿಂದ ಮಗುವಿಗೆ ಆಸೆದೋರಿ ಲಿಂಗವನ್ನು ಪಡೆದು ಪೂಜಿಸಿದ. ಇದರ ಪುಣ್ಯಫಲದಿಂದ ಈತ ಮುಂದಿನ ಜನ್ಮದಲ್ಲಿ ಜಾತಿಸ್ಮರನಾಗಿ ಆನರ್ತ ದೇಶದ ರಾಜನ ಮಗನಾಗಿ ಹುಟ್ಟಿದ. ಪೂರ್ವಜನ್ಮ ಸ್ಮರಣೆಯಿಂದ ಪ್ರತಿನಿತ್ಯ ಲಿಂಗವನ್ನು ತುಪ್ಪದಲ್ಲಿ ಹುದುಗಿಸಿಟ್ಟು ಪೂಜಿಸುತ್ತಿದ್ದರಿಂದ ಸುಪ್ರೀತಗೊಂಡ ಶಿವ, ಈತನಿಗೆ ಪ್ರತಿಪಾಲಕನೆಂದು ಹೆಸರಿಟ್ಟು ತನ್ನ ಗಣದಲ್ಲಿ ಸೇರಿಸಿಕೊಂಡ. ಒಮ್ಮೆ ಹಿಮವತ್ಪ್ರಾಂತದಲ್ಲಿ ಸುಳಿದಾಡುವಾಗ ಗಾಲವ ಮುನಿಪತ್ನಿಯನ್ನು ಕಂಡು ಅವಳಲ್ಲಿ ಮೋಹಗೊಂಡ. ತನ್ನ ಬಕವೃತ್ತಿಯಿಂದ ಗಾಲವ ಮುನಿಯ ಶಿಷ್ಯನಾಗಿ ಸೇರಿಕೊಂಡ. ಗುರುವಿಲ್ಲದ ವೇಳೆಯಲ್ಲಿ ರಜಸ್ವಲೆಯಾಗಿದ್ದ ಅವಳನ್ನು ಅಪಹರಿಸಲು ಯತ್ನಿಸಿ ಮುನಿಯಿಂದ ಶಾಪಹೊಂದಿ ಬಕಪಕ್ಷಿಯಾಗಿ ಹಿಮಾಲಯದಲ್ಲಿ ವಾಸವಾಗಿದ್ದು ಹದಿನಾಲ್ಕು ಕಲ್ಪಗಳ ತರುವಾಯ ಇಂದ್ರದ್ಯುಮ್ನನಿಂದ ಶಾಪ ವಿಮೋಚನೆ ಹೊಂದಿದ.						
	(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ